top of page

ಬೆಳೆಸಿರಿ ರೈತ ಬಳಗ ಯಾಕೆ ಬೇಕು?

ಎಲ್ಲ ರೈತ ಮಿತ್ರರಿಗೆ/ ರೈತಾನಂದರಿಗೆ ನಮಸ್ಕಾರಗಳು!


ಈ ರೈತ ಬಳಗದ ಅವಶ್ಯಕತೆ ಯಾಕೆ ಅಂತ ಹೇಳುವ ಪ್ರಯತ್ನ ಮಾಡ್ತೀನಿ. ನಾನು ಮೊದಲು ಸಾಫ್ಟವೇರ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದೆ. ನನಗೆ ಅಲ್ಲಿಗಿಂತ ಕೃಷಿಯ ಕಡೆಗೆ ಮೊದಲಿನಿಂದಲೂ ಒಲವಿತ್ತು. ಯಾಕೆ ಅಂತ ಗೊತ್ತಿಲ್ಲ! ಬಹುಶಃ ನಾನು ಹಳ್ಳಿಯಲ್ಲಿ ಬೆಳೆದಿದ್ದು ಒಂದು ಕಾರಣವಾದರೆ, ದೇವರ ಸೃಷ್ಟಿಯೇ ಹಾಗೇನೋ ಅನಿಸುತ್ತೆ. ಅದಕ್ಕೆ ತಾನೇ ಒಬ್ಬೊಬ್ಬರ ಆಸಕ್ತಿ ಒಂದೊಂದು ರೀತಿ? ಜಗತ್ತಿನಲ್ಲಿ ವೈವಿಧ್ಯತೆ ಬರೋದೆ ಹಾಗೆ ಅಲ್ಲವೇ !

ಹಲವು ವರ್ಷಗಳ ಹಿಂದೆ ನಾನು ಕೆಲಸಬಿಟ್ಟು ಕೃಷಿಯ ಕಡೆಗೆ ಮುಖ ಮಾಡಿದಾಗ, ಅದು ನಾನು ಅಂದುಕೊಂಡಷ್ಟು ಸುಲಭ ಅಲ್ಲ ಅಂತ ಬಹು ಬೇಗನೆ ಅರಿವಾಯ್ತು. ಕೃಷಿ ವಿಧಾನಗಳು ಅದರ ಒಳ ಗುಟ್ಟುಗಳನ್ನು ತಿಳಿಯಲು ಹಲವಾರು ತರಬೇತಿಗಳನ್ನು ಪಡೆದೆನಾದರೂ ಅದನ್ನು ನಮ್ಮ ಕೈಯಿಂದ ಮಾಡುವ ತನಕ ಅದು ಅರ್ಥವಾಗದು ಅಂತ ಪದೇ ಪದೇ ಅನಿಸುತ್ತಿತ್ತು. ಹೆಚ್ಚಿನ ತರಬೇತಿಗಳು ಒಂದು ದೊಡ್ಡ hall ನಲ್ಲಿ, ಬೋರ್ಡ್ ನಲ್ಲಿ ಇಲ್ಲವೇ presentation ತೋರಿಸುವ ಮೂಲಕ ನಡೆಯುತ್ತವೆ. ಆಗ ನಿಮಗೆ theory ಅರ್ಥ ಆಗುತ್ತದೆ, ಆದರೂ ಪ್ರಯೋಗಿಕವಾಗಿ ತಿಳಿಯಲು ನಾವು ಕೈ ಕೆಸರು ಮಾಡಿಕೊಳ್ಳಲೆಬೇಕು! ಬೆಂಗಳೂರಿನಲ್ಲಿ ವಾಸವಾಗಿದ್ದ ನನಗೆ ಮಣ್ಣಿನಲ್ಲಿ ಕೆಲಸ ಮಾಡುವ ಅವಕಾಶ ತುಂಬಾ ಕಡಿಮೆ ಇತ್ತು. ಯಾಕಂದರೆ ನನ್ನ ಜಮೀನು ಬೆಂಗಳೂರಿನಿಂದ 350 ಕಿಲೋಮೀಟರ್ ದೂರದಲ್ಲಿತ್ತು. ಹೀಗಾಗಿ ಆಗ ನಾನು ಆರಿಸಿಕೊಂಡ ಕೃಷಿ ವಿಧಾನ ಮಣ್ಣು ರಹಿತ ಕೃಷಿ ಅಥವಾ ಹೈಡ್ರೋಪೋನಿಕ್ಸ್. ಈ ವಿಧಾನದಲ್ಲಿ ನನ್ನ ಅಪಾರ್ಟ್ಮೆಂಟ್ ಬಾಲ್ಕನಿ ಯಲ್ಲಿಯೇ ಹಲವಾರು ತರಕಾರಿಗಳನ್ನು ಬೆಳೆದೆ. ಇದರಿಂದ ನನ್ನ ಆತ್ಮವಿಶ್ವಾಸ ಹೆಚ್ಚಿದ್ದು ಹೌದು. ಬೇರೆಯವರಿಗೂ ಕಲಿಸಲು ಶುರು ಮಾಡಿದೆ.

ಹೀಗೆಯೇ ಮುಂದುವರಿದು ಹಾವೇರಿಯ ಸಮೀಪದಲ್ಲಿ ಇರುವ ನನ್ನ ಜಮೀನಿನಲ್ಲಿ ಸಾವಯವ ಕೃಷಿಯನ್ನು ಅಳವಡಿಕೊಳ್ಳಲು ಪ್ರಾರಂಭಿಸಿದೆ. ಇನ್ನೂ ಕಲಿಯುತ್ತಲೇ ಇರುವೆ. ಈ ನನ್ನ ಪಯಣದಲ್ಲಿ ಎಷ್ಟೋ ಹೊಸ ವಿಷಯಗಳು ತಿಳಿದವು. ಹೊಸದು ಅಂದರೆ ನನಗೆ ಹೊಸದಾಗಿದ್ದ ಸಂಗತಿಗಳು ಅಂತ ಅರ್ಥ! ಎಷ್ಟೋ ಜನ ಸಾಧಕರು ಕೂಡ ಸಿಕ್ಕರು. ಅವರಿಂದಲೂ ಕೆಲವು ವಿಷಯಗಳನ್ನು ತಿಳಿದೆ. ಕೆಲವರ ಜೊತೆಗೆ ಸಂದರ್ಶನ ಮಾಡಿದ್ದನ್ನು ನನ್ನ Youtube ಚಾನೆಲ್ ನಲ್ಲಿ ಭಿತ್ತರಿಸಿದೆ ಕೂಡ. ನಮ್ಮ ಚಾನೆಲ್ ನ ಲಿಂಕ್ ಇಲ್ಲಿದೆ: ಬೆಳೆಸಿರಿ ರೈತ ಬಳಗ (Belesiri Raita Balaga) - YouTube


ನನ್ನಂತೆಯೇ ಹೊಸದಾಗಿ ರೈತರಾಗಬೇಕು ಅನ್ನುವವರಿಗೆ ಒಂದು ಮಾಹಿತಿ ಹಾಗೂ ಮಾರ್ಗದರ್ಶನ ಕೊಡುವ ಉದ್ದೇಶದಿಂದ ಈ ಚಾನೆಲ್ ಹಾಗೂ ಬಳಗವನ್ನು ಶುರು ಮಾಡಿದೆ. ಇಲ್ಲಿ ಯಾವುದೇ ತರಹದ ಉತ್ಪ್ರೇಕ್ಷೆಗಳಿಗೆ ಅವಕಾಶ ಇಲ್ಲ. ಅಷ್ಟು ಲಕ್ಷ ಇಷ್ಟು ಲಕ್ಷ ಗಳಿಸಿ ಅನ್ನುವುದೆಲ್ಲ ಇಲ್ಲಿ ಅಲಕ್ಷ್ಯ! ಮುಖ್ಯವಾಗಿ ದಾರಿ ತೋರಿಸುವ ಕೆಲಸ ಮಾಡುವುದೇ ನಮ್ಮ ಉದ್ದೇಶ ಹೊರತು ದಾರಿ ತಪ್ಪಿಸುವುದಲ್ಲ!


ಎಷ್ಟೋ ಜನ ಹೊಸಬರು ಇದ್ದ ದುಡ್ಡನ್ನೆಲ್ಲ ಹಾಕಿ ಜಾಮೀನು ಕೊಂಡುಕೊಳ್ಳುತ್ತಾರೆ. ಅವರಿಗೆ ಹೇಗೆ ಬೆಳೆಯಬೇಕು, ಏನನ್ನು ಬೆಳೆಯಬೇಕು ಎಂಬ ಯಾವುದೇ ಸಂಗತಿಗಳು ಗೊತ್ತಿರುವುದಿಲ್ಲ. ಒಬ್ಬೊಬ್ಬರು ಒಂದೊಂದು ಹೇಳಿ ಅವರ ತಲೆ ಕೆಡಿಸುತ್ತಾರೆ. ಕಡೆಗೆ ಇದು ಯಾವುದರ ಸಹವಾಸವೆ ಬೇಡ ಅಂತ ಬಿಟ್ಟು ವಾಪಸ್ಸು ಹೋಗಿ ಬಿಡುತ್ತಾರೆ. ಅವರ ದುಡ್ಡಿನ ಜೊತೆಗೆ ಕನಸುಗಳು ಭಗ್ನ ಆಗಿರುತ್ತವೆ! ಅಂತಹವರಿಗೆ ಸಹಾಯ ಮಾಡುವುದೇ ನಮ್ಮ ಉದ್ದೇಶ. ನಮ್ಮ ಚಾನೆಲ್ ನಲ್ಲಿ ಸಾವಯವ ಕೃಷಿ ಪದ್ಧತಿಯ ಜೊತೆಗೆ hydroponics ಬಗ್ಗೆ ಕೂಡ ಮಾಹಿತಿ ನೀಡುತ್ತೇವೆ. ಇನ್ನೂ ಬಹಳಷ್ಟು ವಿಷಯಗಳನ್ನು ಚರ್ಚಿಸುವುದಿದೆ, ಎಲ್ಲ ರೈತರನ್ನೂ ಸೇರಿಸಿ ಒಟ್ಟಿಗೆ ಕೆಲಸ ಮಾಡುವ, ಒಳ್ಳೆಯ ವಿಚಾರಗಳನ್ನು ಹಂಚಿಕೊಳ್ಳುವ ಯೋಜನೆಗಳೂ ಇವೆ. ನಾವೆಲ್ಲ ಒಂದಾಗಬೇಕು, ಒಟ್ಟಿಗೆ ಸೇರಿ ಬೆಳೆಯಬೇಕು, ಬಾಳಬೇಕು ಎಂಬ ಆಶಯ ಬೆಳೆಸಿರಿ ರೈತ ಬಳಗದ್ದು ಎಂದು ಹೇಳುತ್ತಾ, ನಿಮಗೇನಾದರೂ ಪ್ರಶ್ನೆಗಳಿದ್ದರೆ ಖಂಡಿತ ನಮಗೆ ತಿಳಿಸಿ. ನನಗೆ ಗೊತ್ತಿಲ್ಲವಾದರೆ ಅನುಭವಿಗಳಿಗೆ ಕೇಳಿ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ.


ವಂದನೆಗಳು,


ಗುರುಪ್ರಸಾದ ಕುರ್ತಕೋಟಿ

37 views0 comments
bottom of page