ಲೇಖಕರು : ಗುರುಪ್ರಸಾದ ಕುರ್ತಕೋಟಿ
ಬೆಲೆ: 180
ಪ್ರಕಾಶನ : ಪರಿಶ ಮಾಧ್ಯಮ
ಇಪ್ಪತ್ತು ವರ್ಷ ಹಲವು ಸಾಫ್ಟ್ವೇರ್ ಕಂಪೆನಿಗಳಲ್ಲಿ ಕೆಲಸ ಮಾಡಿ, ಒಳ್ಳೆಯ ಹುದ್ದೆಯಲ್ಲಿ ಇದ್ದ ನಾನು, ಕೆಲಸ ಬಿಟ್ಟು ಕೃಷಿ ಮಾಡುತ್ತೇನೆ ಎಂಬ ಹುಚ್ಚಿನ ಬೆನ್ನು ಹತ್ತಿದಾಗ ಹುಬ್ಬೇರಿದಸಿದವರೆಷ್ಟೋ, ಬೆನ್ನ ಹಿಂದೆ ನಕ್ಕವರೆಷ್ಟೋ.. ಆದರೆ ಬೇರೆಯವರು ಏನೆಂದುಕೊಂಡಾರು ಎಂಬ ಯೋಚನೆ ನನಗೆ ಅಷ್ಟೆಲ್ಲಾ ಇರಲೇ ಇಲ್ಲ. ಯಾಕಂದರೆ ಆಶಾ ನನ್ನ ಬೆನ್ನ ಹಿಂದೆ ಇದ್ದಳಲ್ಲ! ಅವಳು ಊಹೂಂ ಅಂದಿದ್ದರೆ ನನಗೇನೂ ಮಾಡಲು ಆಗುತ್ತಿರಲಿಲ್ಲವೇನೋ. ಹಾಗಂತ ಕೆಲಸದಲ್ಲಿದ್ದುಕೊಂಡೆ ಕೃಷಿ ಮಾಡುವ ಎಷ್ಟೋ ಜನರು ಇದ್ದಾರೆ. ಆದರೆ ನನಗೆ ಅದಾಗಲೇ ಆ ಕಾರ್ಪೊರೇಟ್ ಬದುಕು ಸಾಕಾಗಿ ಹೋಗಿತ್ತು. ನನಗೆ ಬೇಕಾದ್ದನ್ನು, ಬೇಕಾದಾಗ ಮಾಡುವ ಸ್ವಾತಂತ್ರ್ಯ ಬೇಕಿತ್ತು. ಕಾಕತಾಳೀಯ ಎಂಬಂತೆ ಅದನ್ನು ನಾನು ಪಡೆದುಕೊಂಡಿದ್ದು 2017 ರ ಆಗಸ್ಟ್ ತಿಂಗಳಲ್ಲೇ!
ಕೃಷಿ ಮಾಡುವುದು ಬಾಳೆಹಣ್ಣು ಸುಲಿದಷ್ಟು ಸುಲಭವಲ್ಲ ಅಂತ ಕ್ರಮೇಣ ಅರ್ಥವಾಗತೊಡಗಿತು. ಹಾಗಂತ ಅಸಾಧ್ಯವೂ ಅಲ್ಲ ಅಂತಲೂ ಅನಿಸಿತು. ಅದು ಸಾಧ್ಯವಾಗಿದ್ದು ಕೃಷಿಯೆಡೆಗೆ ನನಗಿದ್ದ ಒಲವು, ನಿರಂತರ ಕಲಿಕೆ ಹಾಗೂ ಬದ್ಧತೆಯಿಂದ. ಅಲ್ಲಿಂದ ಮುಂದಿನ ನನ್ನ ಪಯಣ ರೋಚಕವಾಗಿತ್ತು. ನನ್ನ ಅನುಭವಗಳ ಜೊತೆಗೆ ನಾನು ಕಲಿತ ಕೆಲವು ಹೊಸ ವಿಷಯಗಳನ್ನು ತಿಳಿಸುವ ಪ್ರಯತ್ನದ ಫಲವೆ ಈ ಪುಸ್ತಕ. ನಾನು ಮಾಡಿದ್ದು ದೊಡ್ಡ ಸಾಧನೆ ಅಂತ ಇಲ್ಲಿ ಹೇಳಲು ಹೊರಟಿಲ್ಲ. ಎಷ್ಟೋ ಸಾಧಕರ ಮುಂದೆ ನಾನು ಮಾಡಿದ್ದು ಏನೂ ಅಲ್ಲ. ಕೃಷಿಯಲ್ಲಿ ಇರುವ ಕಷ್ಟ-ನಷ್ಟಗಳ ಬಗ್ಗೆಯೂ ಹೇಳಿ ಹೆದರಿಸುವ ಪುಸ್ತಕ ಕೂಡ ಇದಲ್ಲ. ನನ್ನ ಹಾಗೆಯೇ ಹೊಸದಾಗಿ ಕೃಷಿಗೆ ಧುಮುಕುವವರಿಗೆ ದಾರಿದೀಪ ಆದೀತು ಎಂಬ ಆಶಯ. ವ್ಯವಸಾಯದ ಬಗ್ಗೆ ಏನೂ ಅರಿಯದ ನಾನೇ ಕೆಲವು ಹೆಜ್ಜೆ ಮುಂದೆ ಬಂದಿರುವೆ ಅಂದರೆ ಯಾರು ಬೇಕಾದರೂ ಇದನ್ನು ಮಾಡಲು ಆದೀತು ಎಂಬ ಸಂದೇಶ ಕೊಡುವುದು ಈ ಪುಸ್ತಕದ ಮುಖ್ಯ ಉದ್ದೇಶ.
ಈ ನನ್ನ ಅನುಭವಗಳನ್ನು, ಪ್ರಸಿದ್ಧ “ಕೆಂಡ ಸಂಪಿಗೆ” online ಪತ್ರಿಕೆಯಲ್ಲಿ ಸರಣಿ ರೂಪದಲ್ಲಿ ಬರೆಯುತ್ತಾ ಹೋದಾಗ ನೋಡನೋಡುತ್ತಾ 30 ಕಂತುಗಳು ಆಗಿದ್ದವು. ಅವುಗಳನ್ನು ಪಕಟಿಸಿದ್ದಕ್ಕೆ ಅವರಿಗೆ ತುಂಬು ಹೃದಯದ ಧನ್ಯವಾದಗಳು! ಆಗಾಗ ಓದುಗರಿಂದಲೂ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದ್ದವು. ಹೀಗಾಗಿ ಇದನ್ನು ಪುಸ್ತಕ ರೂಪದಲ್ಲಿ ತರುವ ಯೋಚನೆ ಬಂತು. ಆಗ ನಾನು ಮೂವರ ಬಳಿ ಸಲಹೆ ಕೇಳಿದೆ. ಶ್ರೀ. ಶಂಕರ ಅಜ್ಜಂಪುರ ಸರ್ ಅವರು ಎಂದಿನಂತೆ ಉತ್ಸಾಹ ತುಂಬಿದರು. ಶ್ರೀ. ಹಾಸಾಕೃ ಸರ್ ಅವರು ಕೂಡ ಪೂರ್ತಿ ಹಸ್ತ ಪ್ರತಿಯನ್ನು ಓದಿ ಚೆನ್ನಾಗಿದೆ, ಪ್ರಕಟ ಮಾಡಲು ಅಡ್ಡಿ ಇಲ್ಲ ಅಂದರು. ICRA ಸಂಸ್ಥೆಯ ಶ್ರೀಮತಿ. ಗಾಯತ್ರಿ ಮೇಡಂ ಅವರೂ ಕೂಡ ಹಸ್ತ ಪ್ರತಿಯನ್ನು ಓದಿ ಪುಸ್ತಕ ಮಾಡಿ, ನಾವು ನಮ್ಮ ಸಂಸ್ಥೆಯಿಂದ ಸಾಧ್ಯವಾದ ಸಹಕಾರ ನೀಡುತ್ತೇವೆ ಅಂದರು. ಇವರೆಲ್ಲರಿಗೂ ನಾನು ಋಣಿ!
ನಾನು ಬರೆದ ಪ್ರತಿ ಲೇಖನವನ್ನೂ ಓದಿ, ಕೆಂಡಸಂಪಿಗೆ ಯಲ್ಲಿ ಪ್ರಕಟಿಸಿದ್ದೂ ಅಲ್ಲದೆ ಪುಸ್ತಕಕ್ಕೆ ಒಂದು ಚಂದದ ಮುಖಪುಟ ಮಾಡಿ, ಪುಟಗಳ ವಿನ್ಯಾಸ ಮಾಡಿಕೊಟ್ಟ ಶ್ರೀಮತಿ, ರೂಪಶ್ರೀ ಕಲ್ಲಿಗನೂರ್ ಅವರಿಗೂ ನಾನು ಆಭಾರಿ. ಈ ಪಯಣದಲ್ಲಿ ಕಾಲಕಾಲಕ್ಕೆ ದೇವರೇ ಕಳಿಸಿದನೇನೋ ಎಂಬಂತೆ ಬಂದು ನನಗೆ ಯಾವುದೋ ಒಂದು ರೀತಿಯಲ್ಲಿ ಉಪಕಾರ ಮಾಡಿದ ಎಲ್ಲ ಮಹನೀಯರಿಗೂ ಹೃದಯಪೂರ್ವಕ ಧನ್ಯವಾದಗಳು. ಅವರೆಲ್ಲರ ಬಗ್ಗೆಯೂ ಪುಸ್ತಕದ್ದಲ್ಲಿ ಬರೆದಿದ್ದೆನೆ. ಇದರಲ್ಲಿ ನಡೆದಿರುವ ಘಟನೆಗಳು ಸತ್ಯವಾದರೂ, ಬಹುತೇಕ ಹೆಸರುಗಳು ಕಾಲ್ಪನಿಕ.
ಚಾರ್ಲಿ ಚಾಪ್ಲಿನ್ ಹೇಳಿದಂತೆ, ಹತ್ತಿರದಿಂದ ನೋಡಿದಾಗ ಜೀವನ ಒಂದು ದುರಂತ, ದೂರದಿಂದ ನೋಡಿದಾಗ ಅದೊಂದು ಸುಖಾಂತ (Life is a tragedy when seen in close-up, but a comedy in long-shot). ಆಗ ಮನಸ್ಸಿಗೆ ನೋವು ಕೊಟ್ಟ ಅಂತಹ ಎಷ್ಟೋ ಘಟನೆಗಳು, ಈಗ ಹಿಂತಿರುಗಿ ನೋಡಿದಾಗ ನಗು ತರಿಸುತ್ತವೆ. ಪ್ರೀತಿಯಿಂದ ಈ ಪುಸ್ತಕವನ್ನು ಓದುತ್ತಿರುವ ತಮಗೂ ಓದಿನ ಸುಖವನ್ನು ಈ ಗ್ರಾಮ ಡ್ರಾಮಾಯಣ ಕೊಟ್ಟೀತು ಎಂಬ ಆಶಯ ನನ್ನದು. ಓದಿದ ಮೇಲೆ ನಿಮಗೆ ಹೇಗೆ ಅನಿಸಿತು ಎಂಬುದನ್ನು ಸಾಧ್ಯವಾದರೆ ಒಂದು email ಬರೆದು ದಯವಿಟ್ಟು ತಿಳಿಸಿ.
ಧನ್ಯವಾದಗಳು,
ಗುರುಪ್ರಸಾದ ಕುರ್ತಕೋಟಿ
belesiribalaga@gmail.com
top of page
₹180.00 Regular Price
₹162.00Sale Price
bottom of page