Search

ಹೂವಿನ ಮಾಲೆ

ನಾನು ಆಗಷ್ಟೇ hydroponics ಕಲಿಯುತಿದ್ದ ಸಮಯವದು. ಕೆಲಸವನ್ನೂ ಬಿಟ್ಟಾಗಿತ್ತು. ಮತ್ತೇನಿತ್ತು ಕೆಲಸ? ನನ್ನ ಅಪಾರ್ಟ್ಮೆಂಟ್ ನ ಪೂರ್ವ ದಿಕ್ಕಿನಲ್ಲಿ ಇದ್ದ ಸಣ್ಣ balcony ಯೇ ನನ್ನ ತೋಟಶಾಲೆ ಆಗಿತ್ತು!


ಬೆಳೆ ಬೆಳೆಯುವಾಗ ದಿಕ್ಕುಗಳು ತುಂಬಾ ಮುಖ್ಯವಾಗುತ್ತವೆ. ಅಲ್ಲಿ ವಾಸ್ತು ನೋಡಲೇಬೇಕು. ಯಾಕಂದರೆ ಪೂರ್ವದ ಬೆಳಕು ಸಸ್ಯಗಳ ಬೆಳವಣಿಗೆಗೆ ಉತ್ತಮ. ಟೊಮೇಟೊ, ಬೆಂಡೆಕಾಯಿ, ಹೀರೆಕಾಯಿ, ನೆಲಗಡಲೆ ಎಲ್ಲವನ್ನೂ ಅದೇ ಚಿಕ್ಕ ಜಾಗದಲ್ಲಿ ಬೆಳೆಯಲು ಪ್ರಯತ್ನಿಸಿದೆ. ಹೆಚ್ಚು ಕಡಿಮೆ ಎಲ್ಲವನ್ನೂ ಯಶಸ್ವಿಯಾಗಿ ಬೆಳೆದೆ ಕೂಡ. ನನ್ನ ಬೆಳೆಯುವಿಕೆಗೆ ಹೆಚ್ಚಾದಂತೆ ಇದ್ದ ಜಾಗ ಕಡಿಮೆ ಅನಿಸಲು ಶುರು ಆಗಿತ್ತು. ಆದರೂ ಇದ್ದುದರಲ್ಲೇ ಹೇಗೋ ಸಂಭಾಳಿಸುತ್ತಿದ್ದೆ.


ನನ್ನ ಅಪ್ಪನಿಗೆ ಮೊದಲಿನಿಂದಲೂ ನಾನು ಮಾಡುತ್ತಿದ್ದ ಈ ಹೊಸ ಪ್ರಯೋಗಗಳು ಅಷ್ಟು ಇಷ್ಟವಿರಲಿಲ್ಲ. ಇದ್ದ ಕೆಲಸ ಬಿಟ್ಟು ಇದ್ಯಾವ ಸೀಮೆಯ ಹುಚ್ಚು ಹಚ್ಚಿಕೊಂಡ ನನ್ನ ಮಗ ಅಂತ ಒಳಗೊಳಗೇ ಕೊರಗುತ್ತಿದ್ದ, ಹೊರಗೂ ತೋರ್ಪಡಿಸುತ್ತಿದ್ದ. ಆದರೂ ದಿನ ಕಳೆದಂತೆ, ನನ್ನ ಬೆಳವಣಿಗೆ ಹಾಗೂ ಫಲಿತಾಂಶಗಳನ್ನು ನೋಡುತ್ತಿದ್ದಂತೆ ಅವನಿಗೆ ನನ್ನ ಮೇಲೆ ಸ್ವಲ್ಪ ಸ್ವಲ್ಪ ಭರವಸೆ ಮೂಡತೊಡಗಿತ್ತು. ಮೊದ ಮೊದಲು, ತೆಂಗಿನ ನಾರನ್ನು ಕಲಸಿ ಪ್ಲಾಸ್ಟಿಕ್ ಚೀಲಕ್ಕೆ ತುಂಬುತ್ತಲೋ, ಬೀಜ ಬಿತ್ತುತ್ತಲೋ, ಸಸಿ ನೆಡುತ್ತಲೋ ಕುಳಿತಿರುತ್ತಿದ್ದ ನನ್ನನ್ನು ನೋಡಿ ತಲೆ ಚಚ್ಚಿಕೊಂಡು ತನ್ನ ಅಸಮಾಧಾನ ತೋರುತ್ತಿದ್ದನಾದರೂ ಹೋದ ಹೋದಂತೆ ಮೆಚ್ಚುಗೆಯ ನೋಟ ಬೀರುತ್ತಿದ್ದ.


Hydroponics ಮಾಡುವುದಕ್ಕೆ ಸಸ್ಯಗಳಿಗೆ ಬೇಕಾದ ಪೋಷಕಾಂಶಗಳನ್ನು ನಾನೇ ಮಿಕ್ಸ್ ಮಾಡುವುದನ್ನು ಕಲಿತಾದ ಮೇಲೆ ಮನೆಯಲ್ಲಿ ಎಲ್ಲಾ ಲವಣಗಳನ್ನು ತಂದು, ಕೈಗವಸು ಹಾಕಿಕೊಂಡು ಕಲಸುತ್ತಾ ಕೂತ ನನ್ನನ್ನು ನೋಡಿ ಭಾರಿ scientist ಬಿಡಲೇ ನೀನು, ಹೊಸತಾಗಿ ಕಲ್ತು ಏನೇನೋ ಮಾಡ್ತಿದಿಯಲ್ಲ.. ಮೆಚ್ಚಬೇಕು ನಿನ್ನ.. ಅಂತ ಶಭಾಷಗಿರಿ ಕೂಡ ಕೊಟ್ಟಿದ್ದ .


ಆದರೂ ಇನ್ನೊಂದು ಅಸಮಾಧಾನ ಅವನಿಗಿತ್ತು. ಅನುದಿನವೂ ಅವನು ಸ್ನಾನ ಮಾಡಿ ದೇವರಿಗೆ ಪೂಜೆ ಮಾಡುತ್ತಿದ್ದ. ದೇವರಿಗೆ ಏರಿಸಲು ಹೂವುಗಳನ್ನು ಹೊರಗಿಂದ ಪ್ರತಿ ದಿನ ತರುತ್ತಿದ್ದೆವು. ಏನೇನೋ ಬೆಳೆಯುವ ತನ್ನ ಮಗ ಹೂವನ್ನು ಮಾತ್ರ ಯಾಕೆ ಬೆಳೆಯುತ್ತಿಲ್ಲ ಅನ್ನೋದು ಅವನ ಅಸಮಾಧಾನಕ್ಕೆ ಕಾರಣವಾಗಿತ್ತು.


ಇಷ್ಟೆಲ್ಲಾ ಬೆಳಿತೀದಿ ಹೂವಿನ ಗಿಡ ಒಂದಿಷ್ಟು ಬೇಳಿಲೆ.. ಅಂತಿದ್ದ.


ಅದೇನೋ ಗೊತ್ತಿಲ್ಲ. ಜಾಗದ ಕೊರತೆ ಇತ್ತಾದರೂ ಒಂದು ಮಲ್ಲಿಗೆ ಹೂವಿನ ಗಿಡವಾದರೂ ಹೇಗೋ ಮಾಡಿ ಬೆಳೆಸೋಣ ಅಂದುಕೊಂಡರೆ ಅದು ಸಾಧ್ಯವಾಗುತ್ತಲೆ ಇರಲಿಲ್ಲ. ಹಚ್ಚಿದ್ದ ಒಂದೆರಡು ಹೂವಿನ ಗಿಡಗಳು ಕೂಡ ಯಾಕೋ ಅಷ್ಟು ಚೆನ್ನಾಗಿ ಬೆಳೆಯಲಿಲ್ಲ. ಅವನು ಇರುವ ತನಕವೂ ಹೂವು ಬೆಳೆಯಲು ನನಗೆ ಸಾಧ್ಯವೇ ಆಗಲಿಲ್ಲ. ಅದೊಂದು ಬೇಜಾರು ನನಗೂ ಇದೆ.


ಮುಂದೆ ಇನ್ನೊಂದಿಷ್ಟು ಬೇರೆ ಜಾಗ ಬಾಡಿಗೆ ತೆಗೆದುಕೊಂಡು ಮಲ್ಲಿಗೆ, ಗುಲಾಬಿ, ಅಬೋಲಿ ಯಂತಹ ತರತರಹದ ಹೂವಿನ ಗಿಡಗಳನ್ನು ಬೆಳೆಸಿದೆವು. ಮಾಲೆ ಕಟ್ಟುವಷ್ಟು ಹೂವುಗಳು ದಿನವೂ ಅರಳುತ್ತವೆ. ಈಗಲೂ ಹೂವು ಕೀಳುವಾಗ ಅಪ್ಪನ ನೆನಪಾಗುತ್ತದೆ. ದೇವರಿಗೆ ಏರಿಸುವಾಗಲೆಲ್ಲ ಆಶಾ ನಾನು ಎಷ್ಟೋ ಸಲ ನೆನೆಸುತ್ತೇವೆ. ಈಗ ಅಪ್ಪನ ಆತ್ಮಕ್ಕೆ ಶಾಂತಿ ಸಿಕ್ತು ನೋಡು ಅಂತ ಅವಳೂ ಹೇಳುತ್ತಾಳೆ... (ಮುಂದುವರಿಯುವುದು)


ನಮ್ಮನೆಯ ಹೂಗಳ ದೃಶ್ಯಾವಳಿ ಇಲ್ಲಿದೆ:

10 views0 comments

Recent Posts

See All

My first trip to USA was in 2008. I flew to Utah for work with two of my colleagues. We were left with tonnes of work and ten weekends to explore the beauty the city. Another colleague of mine, wh